MOLAKE KALUGALA PAV BHAJI ಮೊಳಕೆ ಕಾಳುಗಳ ಪಾವ್ ಭಾಜಿ

////MOLAKE KALUGALA PAV BHAJI ಮೊಳಕೆ ಕಾಳುಗಳ ಪಾವ್ ಭಾಜಿ

MOLAKE KALUGALA PAV BHAJI ಮೊಳಕೆ ಕಾಳುಗಳ ಪಾವ್ ಭಾಜಿ

ಪಾವ್ ಭಾಜಿ ಎಲ್ಲರ ಪ್ರಿಯವಾದ ತಿಂಡಿ! ಮಕ್ಕಳಿಗಂತೂ ಬಹಳ ಪ್ರಿಯವಾದದ್ದು! ಸಾಧಾರಣವಾಗಿ ಭಾಜಿ ಎಲ್ಲರೂ ತರಕಾರಿಗಳನ್ನು ಹಾಕಿ ಮಾಡುತ್ತಾರೆ. ಮೊಳಕೆ ಕಾಳುಗಳನ್ನು ಹಾಕಿ ಮಾಡಿರುವದೇ ಈ ರೆಸಿಪಿಯ ವಿಶೇಷತೆ!

ಮಾಡುವ ವಿಧಾನ:-

ಭಾಜಿ ಮಾಡಲು:-

1/2 ಲೋಟ ಕಡಲೇ ಕಾಳು, 1/2 ಲೋಟ ಹೆಸರು ಕಾಳು ನೆನೆಸಿ ಸೋರಿ ಹಾಕಿ ಬಟ್ಟೆಯಲ್ಲಿ ಕಟ್ಟಿ ಮೊಳಕೆ ಬರಲು ಬಿಡಿ.

  

ಮರುದಿನ 1 ಆಲೂಗೆಡ್ಡೆ ಸಿಪ್ಪೆ ತೆಗೆದು ದೊಡ್ಡ ದೊಡ್ಡದಾಗಿ ಕತ್ತರಿಸಿ, ಮೊಳಕೆ ಕಾಳುಗಳು, ಒಂದು ಹಿಡಿ ಹಸಿ ಬಟಾಣಿ( ನಾನು ಹಾಕಿರುವುದು ಮೊಳಕೆ ಬಂದ ಹಸಿ ಬಟಾಣಿ, ಹಸಿ ಬಟಾಣಿ ಬಿಡಿಸಿ Fridge ನಲ್ಲಿಟ್ಟು ಮರೆತಿದ್ದೆ. ವಾರದ ಮೇಲಾಗಿತ್ತು! ತೆಗೆದು ನೋಡಿದಾಗ 1 ಇಂಚು ಉದ್ದದ ಮೊಳಕೆ ಬಂದಿತ್ತು!) ಸ್ವಲ್ಪ ನೀರು ಹಾಕಿ ನಾಲ್ಕೈದು ವಿಷಲ್ ಕೂಗಿಸಿಡಿ. ಕಾಳುಗಳು ಚೆನ್ನಾಗಿ ಬೇಯಬೇಕು. ನಂತರ ನೀರು ತೆಗೆದು ಬಿಸಿಯಿದ್ದಾಗಲೇ ಚೆನ್ನಾಗಿ Smash ಮಾಡಿಡಿ. ಕಾಳು ಬೇಯಿಸಿದ ನೀರು ಚೆಲ್ಲದೆ ಗ್ರೇವಿಗೆ ಹಾಕಲು ಇಡಿ.

2 ಟೋಮೋಟೋ, 1 ಈರುಳ್ಳಿ ಸಣ್ಣಗೆ ಹೆಚ್ಚಿಡಿ.

ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ ಜೀರಿಗೆ, ಹೆಚ್ಚಿದ ಈರುಳ್ಳಿ, ಟೋಮೇಟೋ ಹಾಕಿ ಸ್ವಲ್ಪ ಹುರಿದು, 1 ಚಮಚ ಜಿಂಜರ್ ಗಾರ್ಲಿಕ್ ಪೇಸ್ಟ್, 1 ಚಮಚ ಖಾರದ ಪುಡಿ, 1 ಚಮಚ ಪಾವ್ ಭಾಜಿ ಮಸಾಲ, 1/2 ಚಮಚ ಗರಂ ಮಸಾಲ, ಚಿಟಿಕೆ ಅರಿಷಿಣ, ಉಪ್ಪು ಹಾಕಿ ಬಾಡಿಸಿ ಕಾಳುಗಳ ಮಿಶ್ರಣ, ಕಾಳು ಬೇಯಿಸಿದ ನೀರು ಹಾಕಿ ಕುದಿಸಿ ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು, 1/2 ಹೋಳು ನಿಂಬೆ ರಸ ಹಾಕಿದರೆ ರುಚಿಯಾದ ಮೊಳಕೆ ಕಾಳುಗಳ ಭಾಜಿ ಸಿದ್ಧ!

 

ಪಾವ್ ಮಾಡಲು:-

ಕಾವಲಿ ಬಿಸಿಯಾಗಲು ಇಡಿ. ಪಾವ್ ಅನ್ನು ಅಡ್ಡವಾಗಿ ಕತ್ತರಿಸಿ. ಕಾವಲಿ ಮೇಲೆ 1 ಚಮಚ ಬೆಣ್ಣೆ ಹಾಕಿ ಕತ್ತರಿಸಿದ ಪಾವ್ ಅನ್ನು ಕಾವಲಿಯ ಮೇಲೆ ಹಾಕಿ ಎರಡೂ ಕಡೆ ಬೇಯಿಸಿ. ಪಾವ್ ಅನ್ನು ತೆಗೆದು ಒಂದು ಚಮಚ ಭಾಜಿಯನ್ನು ಕಾವಲಿಯ ಮೇಲೆ ಹಾಕಿ ಕತ್ತರಿಸಿದ ಪಾವ್ ಭಾಗವನ್ನು ಭಾಜಿ ಮೇಲೆ ಬರುವಂತೆ ಹಾಕಿ ಭಾಜಿ ಪೂರ್ತಿಯಾಗಿ ಪಾವ್ ಒಳಗೆ ಹೋಗುವಂತೆ ಒತ್ತಿ ತೆಗೆಯಿರಿ. ನಂತರ ಒಂದು ಬಟ್ಟೆ ಅಥವಾ ಕಿಚನ್ ಟವೆಲ್ ನಿಂದ ಕಾವಲಿಯನ್ನು ಒರೆಸಿ ಮಿಕ್ಕ ಪಾವ್ ನಿಂದ ಇದೇ ರೀತಿ ಮಾಡಿ.

  

ಬಡಿಸುವಾಗ ಪಾವ್, ಭಾಜಿ, ಸಣ್ಣಗೆ ಹೆಚ್ಚಿದ ಈರುಳ್ಳಿ, ಹೆಚ್ಚಿದ ನಿಂಬೆಯ ಹೋಳಿನೊಡನೆ ಬಡಿಸಿದರೆ ರುಚಿಯಾದ ಮೊಳಕೆ ಕಾಳುಗಳ ಪಾವ್ ಭಾಜಿ ಸಿದ್ಧ!

ಧನ್ಯವಾದಗಳು

By | 2017-12-26T22:32:18+00:00 December 26th, 2017|Kannada, Tindi Tinisu|0 Comments

About the Author:

Indu Jayaram is a homemaker and regularly writes on home cooked food. She has more than 10,000 followers in her facebook page https://www.facebook.com/pg/indumathijayaram/

Leave A Comment

%d bloggers like this: