+91 9611100374|admin@indiaforyou.in

HERALI KAYI GOJJU & CHITHRANNA ಹೇರಳೆ ಕಾಯಿ ಗೊಜ್ಜು ಮತ್ತು ಚಿತ್ರಾನ್ನ

/, Oota, upahara/HERALI KAYI GOJJU & CHITHRANNA ಹೇರಳೆ ಕಾಯಿ ಗೊಜ್ಜು ಮತ್ತು ಚಿತ್ರಾನ್ನ

HERALI KAYI GOJJU & CHITHRANNA ಹೇರಳೆ ಕಾಯಿ ಗೊಜ್ಜು ಮತ್ತು ಚಿತ್ರಾನ್ನ

ಹೇರಳೆ ಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಪಿತ್ತನಾಶಕ! ಮಧು ಮೇಹವನ್ನು ಹತೋಟಿಯಲ್ಲಿ ಇಡುತ್ತದೆ. ಬಾಣಂತಿಯರಿಗೆ ಸಹ ಇದರ ರಸದದಿಂದ ಗೊಜ್ಜು ಮಾಡಿ ಕೊಡುತ್ತಾರೆ. ಆರೋಗ್ಯಕರವಾದ, ರುಚಿಕರವಾದ ಹೇರಳೆ ಕಾಯಿಯ ಗೊಜ್ಜಿನ ರೆಸಿಪಿ ಇಲ್ಲಿದೆ.

ಹೇರಳೆ ಕಾಯಿ ಗೊಜ್ಜು ಮಾಡುವ ವಿಧಾನ :-

   

1 ಚಮಚ ಉದ್ದಿನ ಬೇಳೆ, 3/4 ಚಮಚ ಕಡಲೇ ಬೇಳೆ, 1/2 ಚಮಚ ಜೀರಿಗೆ, 1/2 ಚಮಚ ಮೆಂತ್ಯ, 1 ಚಮಚ ಬಿಳಿ ಎಳ್ಳು ಇಷ್ಟನ್ನು ಹುರಿದಿಡಿ. 8 ಬ್ಯಾಡಗಿ ಮೆಣಸಿನ ಕಾಯಿ ಸ್ವಲ್ಪ ಎಣ್ಣೆ ಹಾಕಿ ಹುರಿದು ಬೇಳೆಗಳ ಜೊತೆ ಹಾಕಿ ಪುಡಿ ಮಾಡಿ, 2 ಚಮಚ ಕಾಯಿ ತುರಿ ಹಾಕಿ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ. ಖಾರಾ ನಿಮಗೆ ಎಷ್ಟು ಬೇಕೋ ಅಷ್ಟು ಹಾಕಿಕೊಳ್ಳಿ.

       

ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಸಾಸಿವೆ, ಕರಿಬೇವು, ಇಂಗು ಹಾಕಿ, ರುಬ್ಬಿದ ಮಿಶ್ರಣ, ಚೂರು ಬೆಲ್ಲ, ಉಪ್ಪು, ಸ್ವಲ್ಪ ನೀರು ಹಾಕಿ ಕುದಿಸಿ. ಕೊನೆಯಲ್ಲಿ 1 ಹೇರಳೆ ಕಾಯಿಯ ರಸ ಹಿಂಡಿ ಬೀಜ ತೆಗೆದು ಹಾಕಿ ಗೊಜ್ಜಿಗೆ ಹಾಕಿ, ಒಲೆಯಿಂದ ತೆಗೆದಿಡಿ.

ಹುಳಿ ಇಷ್ಟ ಪಡುವವರು ಬೇಕಾದರೆ ಸ್ವಲ್ಪ ಹುಣಿಸೆ ರಸ ಹಾಕಿ, ಹೇರಳೆ ಕಾಯಿ ರಸವೇ ಸಾಕಷ್ಟು ಹುಳಿ ಇರುತ್ತೆ.

      

ರಾಗಿ ಮುದ್ದೆ, ಬಿಸಿ ಅನ್ನದ ಜೊತೆ ತುಂಬಾ ಚೆನ್ನಾಗಿರುತ್ತೆ. ಕೆಲವರು ಹೇರಳೆ ಕಾಯಿ ಚಿಕ್ಕದಾಗಿ ಹೆಚ್ಚಿ ಗೊಜ್ಜು ಮಾಡುತ್ತಾರೆ. ನಮ್ಮ ಮನೇಲಿ ಹೀಗೆ ಮಾಡುವುದು. ನಿಮಗೆ ಹುಳಿ ಮತ್ತು ಸಿಪ್ಪೆಯ ಕಹಿ ಇಷ್ಟ ಆದರೆ ಹೆಚ್ಚಿ ಹಾಕಿ ಗೊಜ್ಜು ಮಾಡಿ. ಹೇರಳೆ ಕಾಯಿ ಸ್ವಲ್ಪ ಕಹಿ ಇದ್ದರೂ ಆರೋಗ್ಯಕ್ಕೆ ಬಹಳ ಒಳ್ಳೆಯದು.

ಇದೇ ರುಬ್ಬಿದ ಮಿಶ್ರಣಕ್ಕೆ ಪೈನಾಪಲ್ ಸಿಪ್ಪೆ ತೆಗೆದು ಚಿಕ್ಕದಾಗಿ ಹೆಚ್ಚಿ, ಸ್ವಲ್ಪ ತುಪ್ಪ ಹಾಕಿ ಹುರಿದು, ಸ್ವಲ್ಪ ಹುಣಿಸೆ ರಸ ಹಾಕಿ ಕುದಿಸಿದರೆ ರುಚಿಯಾದ ಪೈನಾಪಲ್ ಗೊಜ್ಜು ರೆಡಿ!

ಬೆಂಡೆ ಕಾಯಿ, ಹಾಗಲ ಕಾಯಿ ಹುರಿದು ಹಾಕಿ ಬೇಕಾದರೂ ಇದೇ ರೀತಿ ಗೊಜ್ಜು ಮಾಡಬಹುದು. ಈಗ ಮದುವೆ ಮನೆಗಳಲ್ಲಿ ಒಣಗಿದ ದ್ರಾಕ್ಷಿಯ ಗೊಜ್ಜು ಸಹ ಇದೇ ರೀತಿ ಮಾಡುತ್ತಾರೆ.

ನಿಮಗೆ ಇಷ್ಟವಾದ ತರಕಾರಿ ಹಾಕಿ ಗೊಜ್ಜು ಮಾಡಿಕೊಳ್ಳಿ. ಗ್ರೂಪಿನಲ್ಲಿ ತುಂಬಾ ಜನ ಗೊಜ್ಜು ರೆಸಿಪಿ ಕೇಳಿದ್ದರು. ಹಾಗಾಗಿ ಈ ರೆಸಿಪಿ.


ಹೇರಳೆ ಕಾಯಿ ಚಿತ್ರಾನ್ನ

1 ಲೋಟ ಅಕ್ಕಿ ತೊಳೆದು ಅನ್ನ ಮಾಡಿಡಿ.

4 ಚಮಚ ಕಾಯಿ ತುರಿ, 4 ಹಸಿ ಮೆಣಸಿನ ಕಾಯಿ, 1/2 ಇಂಚು ಸಿಪ್ಪೆ ತೆಗೆದು ಶುಂಠಿ, ಕೊತ್ತಂಬರಿ ಸೊಪ್ಪು ನೀರು ಹಾಕದೆ ತರಿ ತರಿಯಾಗಿ ರುಬ್ಬಿಡಿ.

ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ 1 ಹಿಡಿ ಕಡಲೇ ಬೀಜ ಹಾಕಿ ಕರಿದು ತೆಗೆದಿಡಿ. ಅದೇ ಬಾಣಲೆಯಲ್ಲಿ ಸಾಸಿವೆ, ಜೀರಿಗೆ, ಕಡಲೇ ಬೇಳೆ, ಉದ್ದಿನ ಬೇಳೆ, ಕರಿಬೇವು ಹಾಕಿ ಹುರಿದು, ರುಬ್ಬಿದ ಮಿಶ್ರಣ, ಇಂಗು, ಅರಿಷಿಣ, ಉಪ್ಪುಹಾಕಿ ಸ್ವಲ್ಪ ಹುರಿದು, ಮಾಡಿಟ್ಟ ಅನ್ನ, 1/2 ಹೇರಳೆ ಕಾಯಿ ರಸ, ಕರಿದ ಕಡಲೇ ಬೀಜ ಹಾಕಿ, ಕಲೆಸಿ ಸ್ವಲ್ಪ ಬಿಸಿ ಮಾಡಿದರೆ ಆರೋಗ್ಯಕರ, ರುಚಿಯಾದ ಹೇರಳೆ ಕಾಯಿ ಚಿತ್ರಾನ್ನ ಸಿದ್ಧ!

ಹೇರಳೆ ಕಾಯಿಯನ್ನು ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ” ಕಂಚಿ ಕಾಯಿ ” ಎಂದು ಕರೆಯುತ್ತಾರೆ.

ಧನ್ಯವಾದಗಳು.

By | 2017-12-04T18:50:59+00:00 December 1st, 2017|Kannada, Oota, upahara|0 Comments

About the Author:

Indu Jayaram is a homemaker and regularly writes on home cooked food. She has more than 10,000 followers in her facebook page https://www.facebook.com/pg/indumathijayaram/

Leave A Comment

Bitnami