ಸಾವಿಗಾಗಿ ಸಿದ್ಧತೆ

//ಸಾವಿಗಾಗಿ ಸಿದ್ಧತೆ

ಸಾವಿಗಾಗಿ ಸಿದ್ಧತೆ

ಈ ಎರಡಕ್ಷರದ ಪದ ಯಾರನ್ನು ತಾನೆ ಬೆಚ್ಚಿ ಬೀಳಿಸದು? ಆದರೂ ಯಾರಿಗಾದರೂ ಇದರಿಂದ ತಪ್ಪಿಸಿಕೊಳ್ಳಲಾಗಿದೆಯೆ? ಈ ಸಾವಿಗೆ ರಜೆ ಇರುವ ದಿನವೇ ಇಲ್ಲವೇನೊ? ದಿನನಿತ್ಯವೂ ನಮ್ಮ ಸುತ್ತ ಮುತ್ತ ನಮ್ಮ ಸಹಮಾನವರು ಒಬ್ಬೊಬ್ಬರಾಗಿ ಸಾವಿನ ಕರೆಗೆ ಓಗೊಡುತ್ತಿರುವುದನ್ನು ನಾವು ನೋಡುತ್ತಲೇ ಇದ್ದೇವೆ. ಆಗ ಮನಸ್ಸಿಗೆ ದುಃಖವಾಗುತ್ತದೆ. ಒಂದು ದಿನ ನಮ್ಮ ಸರತಿಯೆಂಬ ಕಟು ಸತ್ಯ ಕಣ್ಣ ಮುಂದೆ ಕುಣ ದು ಅಣಕಿಸಿ ಓಡಿ ಹೋಗುತ್ತದೆ. ಆ ಕ್ಷಣ ನಮ್ಮಲ್ಲಿ ಜಗತ್ತಿನ ಬಗ್ಗೆ ತಾತ್ಕಾಲಿಕ ವೈರಾಗ್ಯ ಉದಿಸುತ್ತದೆ. ಕೆಲವು ದಿನಗಳ ನಂತರ ಮತ್ತೆ ಪುನರ್ಮೂಷಿಕೋ ಭವ ಎಂಬಂತೆ ಆಗುತ್ತೇವೆ. ಇದನ್ನು ಮಹಾಭಾರತದ ಯಕ್ಷಪ್ರಶ್ನೆಯಲ್ಲಿ ಯುಧಿಷ್ಠಿರನು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಸುಂದರವಾಗಿ ನುಡಿಯುತ್ತಾನೆ, ” ಹಗಲೂ ಇರುಳೂ ತನ್ನ ಕಣ್ಣ ಮುಂದೆಯೆ ತನ್ನ ಸಹಮಾನವರು ಮೃತ್ಯುವಿನ ಮನೆಗೆ ಹೋಗುತ್ತಿರುವುದನ್ನು ನೋಡುವ ಜನ, ತಾವು ಮಾತ್ರ ಶಾಶ್ವತವೆಂಬ ಕಲ್ಪನೆಯಲ್ಲೆ ಬದುಕುತ್ತಾರೆ. ಇದಕ್ಕಿಂತ ಆಶ್ಚರ್ಯದ ಸಂಗತಿ ಇನ್ನೊಂದಿಲ್ಲ”. ಬುದ್ಧ ಒಮ್ಮೆ ತನ್ನ ಶಿಷ್ಯಂದಿರಿಗೆ ಮನುಷ್ಯನ ಆಯುಸ್ಸೆಷ್ಟೆಂದು ಕೇಳುತ್ತಾನೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಉತ್ತರಿಸುತ್ತ, ‘ನೂರು’, ‘ಎಪ್ಪತ್ತು’, ‘ಐವತ್ತು’, ‘ಒಂದು’ ವರ್ಷಗಳು ಎನ್ನುತ್ತಾರೆ. ಅದರಲ್ಲಿ ಒಬ್ಬ ಬುದ್ಧಿವಂತ ಮಾತ್ರ ಒಂದು ದಿನ ಎಂದು ಉತ್ತರಿಸುತ್ತಾನೆ. ಎಲ್ಲರೂ ಬುದ್ಧನ ಉತ್ತರಕ್ಕಾಗಿ ಎದುರು ನೋಡುತ್ತಾರೆ. “ಒಂದು ನಿಶ್ವಾಸ ಮಾತ್ರ” ಎಂಬ ಉತ್ತರ ಅವನ ಬಾಯಿಂದ ಬರುತ್ತದೆ. ಅವನು ತನ್ನ ಮಾತನ್ನು ಮುಂದುವರೆಸುತ್ತ ಹೇಳುತ್ತಾನೆ, “ಯಾರು ತಮ್ಮ ಆಯುಸ್ಸು ನೂರು, ಎಪ್ಪತ್ತು, ಐವತ್ತು-ಹೀಗೆಂದುಕೊಂಡು ಬದುಕುತ್ತಾರೊ ಅವರು ತಮ್ಮ ಮನಸ್ಸಿನ ಕೊಳೆಯನ್ನು ತೊಳೆಯುವಲ್ಲಿ ಸರಿಯಾದ ಶ್ರಮವನ್ನು ಉಪಯೋಗಿಸುವುದಿಲ್ಲ. ಅವರು ಆಲಸ್ಯದಿಂದಿದ್ದು ಹಾಗೆಯೆ ಕೊನೆಗಾಲದಲ್ಲಿ ದೇಹವನ್ನು ತೊರೆದು ಜನ್ಮವನ್ನು ವಿಫಲಗೊಳಿಸಿಕೊಳ್ಳುತ್ತಾರೆ. ಆದರೆ, ಯಾರು ತಮ್ಮ ಆಯುಸ್ಸು ಒಂದು ನಿಶ್ವಾಸದಷ್ಟು ಮಾತ್ರ. ಹೀಗಾಗಿ ನಾನು ಕಟಿಬದ್ಧನಾಗಿ, ಜಾಗರೂಕನಾಗಿ ಈ ಆಯುಸ್ಸನ್ನು ಮನಸ್ಸಿನ ಕೊಳೆಯನ್ನು ತೊಳೆಯಲು ಸರ್ವಥಾ ವಿನಿಯೋಗಿಸುತ್ತೇನೆ ಎಂದು ಸರಿಯಾಗಿ ಸಂಕಲ್ಪಿಸಿ ಕಾರ್ಯತತ್ಪರನಾಗುವನೊ ಅವನ ಜನ್ಮ ಸಫಲ”, ಎಂದು. ಆಧ್ಯಾತ್ಮಿಕ ಜೀವನದಲ್ಲಂತೂ ಈ ಸಾವಿಗಾಗಿ ಸಿದ್ಧತೆ ಅತ್ಯಂತ ಪ್ರಮುಖ ಸ್ಥಾನವನ್ನೇ ಅಲಂಕರಿಸಿರುತ್ತದೆ.

By | 2017-05-15T00:04:12+00:00 May 15th, 2017|Kannada Articles|0 Comments

About the Author:

%d bloggers like this: