ಸರಳತೆ

//ಸರಳತೆ

ಸರಳತೆ

ಬಂಗಾಳದ ಪ್ರಸಿದ್ಧ ಸಂತರೂ, ಭಕ್ತಿಪಥದ ಪ್ರಚಾರಕರೂ ಆದ ಶ್ರೀಚೈತನ್ಯ ಮಹಾಪ್ರಭುಗಳು ಒಮ್ಮೆ ದಕ್ಷಿಣ ಭಾರತದ ತೀರ್ಥಯಾತ್ರೆಯನ್ನು ಕೈಗೊಂಡಿದ್ದಾಗ ಶ್ರೀರಂಗಂಗೆ ಬಂದಿದ್ದರು. ಅವರು ಶ್ರೀಕ್ಷೇತ್ರದ ದೇವಾಲಯದ ಪ್ರದಕ್ಷಿಣೆ ಮಾಡುತ್ತಿದ್ದಾಗ ಅಲ್ಲಿ ಮೂಲೆಯಲ್ಲಿ ಕುಳಿತುಕೊಂಡು ಗೀತೆಯನ್ನು ಓದುತ್ತಿದ್ದ ವ್ಯಕ್ತಿ ಅವರ ಕಣ ್ಣಗೆ ಬಿದ್ದ. ಆತ ತಪ್ಪು ತಪ್ಪಾಗಿ ಉಚ್ಚರಿಸುತ್ತಿದ್ದುದನ್ನು ಕಂಡು ಸುತ್ತಲಿದ್ದ ಜನರು ಅಪಹಾಸ್ಯ ಮಾಡಿ ನಗುತ್ತಿದ್ದರು. ಆದರೂ ಆ ವ್ಯಕ್ತಿ ಬಿಡದೆ ತನ್ನ ಪಠನವನ್ನು ಮುಂದುವರೆಸುತ್ತಿದ್ದ. ಚೈತನ್ಯರು ಅವನ ಹತ್ತಿರ ಹೋದರು. ಆ ವ್ಯಕ್ತಿ ಓದುತ್ತ ಓದುತ್ತ ಸುಮ್ಮನೆ ಕಣ ್ಣೀರು ಸುರಿಸುತ್ತಿದ್ದಾನೆ. “ಮಹಾಶಯ, ನೀನು ಅಷ್ಟು ಆನಂದಾಶ್ರು ಸುರಿಸುತ್ತ ಓದುತ್ತಿದ್ದಿಯಲ್ಲ? ಅದ್ಯಾವ ಅರ್ಥ ನಿನಗೆ ಸ್ಫುರಣೆಯಾಗುತ್ತಿದೆ”, ಕೇಳಿದರು ಚೈತನ್ಯರು. ಆ ವ್ಯಕ್ತಿ ಹೇಳಿದ, “ಮಹಾಶಯರೆ, ನಾನೇನೂ ಓದಿದವನಲ್ಲ. ನನ್ನ ಗುರುಗಳು ನಿತ್ಯವೂ ದೇವಾಲಯದಲ್ಲಿ ಗೀತೆಯ ಪಠನ ಮಾಡುವಂತೆ ಆಜ್ಞೆ ಇತ್ತಿದ್ದರು. ಅದಕ್ಕಾಗಿ ಅನೇಕ ತಪ್ಪುಗಳಾದರೂ ಬಿಡದೆ ಓದುತ್ತಿದ್ದೇನೆ. ಆದರೆ, ನಾನು ಗೀತೆಯನ್ನು ಓದಲಿಕ್ಕೆ ಶುರು ಮಾಡಿದಾಗ ಭಗವಾನ್ ಶ್ರೀಕೃಷ್ಣ ರಥದ ಮೇಲೆ ಕುಳಿತುಕೊಂಡು ಅರ್ಜುನನಿಗೆ ಉಪದೇಶ ಮಾಡುತ್ತಿರುವುದು ನನಗೆ ಸ್ಪಷ್ಟ ಅನುಭವಕ್ಕೆ ಬರುತ್ತದೆ. ಅದರ ಆನಂದಾತಿಶಯದ ಕಣ ್ಣೀರು ಇದು”, ಎಂದು. ಚೈತನ್ಯರು ಈ ಉತ್ತರದಿಂದ ಬಹಳ ಸಂತುಷ್ಟರಾಗಿ ಹೇಳಿದರು, “ಮಹಾಶಯ, ಗೀತೆಯ ಸಾರವನ್ನು ನೀನು ಮಾತ್ರ ತಿಳಿದಿರುವೆ. ಗೀತೆಯನ್ನು ಓದುವ ಅಧಿಕಾರ ನಿನಗೆ ಮಾತ್ರ ಇದೆ”, ಎಂದು. ಆ ವ್ಯಕ್ತಿ ಸರಳನಾಗಿದ್ದ. ಗುರುವಿನ ಆಜ್ಞೆಯನ್ನು ಪಾಲಿಸುವುದಕ್ಕಾಗಿ ತನ್ನ ಇತಿಮಿತಿಯನ್ನರಿತಿದ್ದರೂ, ಜನಾಪವಾದ ಉಂಟಾಗುತ್ತಿದ್ದರೂ ದಿನವೂ ತಪ್ಪದೆ ಗೀತಾ ಪಾರಾಯಣ ಮಾಡುತ್ತಿದ್ದ. ವ್ಯಕ್ತಿ ಸರಳನಾಗದೆ ಹೋದರೆ, ಗುರು ಹಾಗೂ ಶಾಸ್ತ್ರವಾಕ್ಯಗಳ ಮರ್ಮ ಅವನಿಗೆ ಅರ್ಥವಾಗದು. ಅದರ ಅರ್ಥವನ್ನು ತಿರುಚಿ, ತನ್ನ ಸ್ವಾರ್ಥಕ್ಕೆ ಅನುಕೂಲವಾಗುವಂತೆ ಪಾಲಿಸುತ್ತಾನೆ. ಅದರಿಂದ ಉದ್ದೇಶಿತ ಪ್ರಯೋಜನ ಉಂಟಾಗುವುದಿಲ್ಲ. ಶ್ರೀರಾಮಕೃಷ್ಣ ಪರಮಹಂಸರು, “ಮನುಷ್ಯ ಸರಳನಾಗದೆ ಭಗವಂತನನ್ನು ಪಡೆಯಲಾರ” ಎನ್ನುತ್ತಿದ್ದರು. ಆದರೆ, ಸರಳನಾಗುವುದು ಅಷ್ಟು ಸುಲಭವಲ್ಲ. ಮನಸ್ಸಿನಲ್ಲಿ ಯಾವುದೆ ರೀತಿಯ ಕುಟಿಲತೆ ಅಥವಾ ಲೆಕ್ಕಾಚಾರದ ಬುದ್ಧಿ ಇದ್ದಲ್ಲಿ ಸರಳತೆ ದಕ್ಕುವುದಿಲ್ಲ. ಇದಕ್ಕಾಗಿ ಸತತ ಸಾಧನೆ, ಭಗವಂತನಲ್ಲಿ ಪ್ರಾರ್ಥನೆ ಅತ್ಯಾವಶ್ಯಕ.

By | 2017-05-15T00:07:18+00:00 May 15th, 2017|Kannada Articles|0 Comments

About the Author:

Leave A Comment

%d bloggers like this: