ನಿಜವಾದ ಶಾಂತಿ

//ನಿಜವಾದ ಶಾಂತಿ

ನಿಜವಾದ ಶಾಂತಿ

ಒಂದೂರಿನ ಒಬ್ಬ ರಾಜ ಒಮ್ಮೆ ‘ಶಾಂತಿ’ ಎಂಬ ತತ್ವದ ಮೇಲೆ ಯಾರು ಅತ್ಯುತ್ತಮವಾದ ಚಿತ್ರವನ್ನು ರಚಿಸುವರೊ ಅವರಿಗೆ ಸೂಕ್ತ ಬಹುಮಾನ ನೀಡುವುದಾಗಿ ಡಂಗುರ ಹೊಡೆಸಿದ. ಹಲವು ಕಲಾವಿದರು ಪ್ರಯತ್ನಿಸಿದರು. ರಾಜ ಪ್ರತಿಯೊಂದು ಚಿತ್ರವನ್ನೂ ನೋಡಿ ಕೊನೆಗೆ ಎರಡು ಚಿತ್ರಗಳು ಅವನ ಗಮನವನ್ನು ಸೆರೆ ಹಿಡಿದಿದ್ದರಿಂದ, ಅವುಗಳ ಮಧ್ಯೆ ಅತ್ಯುತ್ತಮವಾದುದನ್ನು ಆರಿಸಲು ನಿರ್ಧರಿಸಿದ. ಒಂದನೆ ಚಿತ್ರದಲ್ಲಿ ಸುತ್ತಲೂ ಶಾಂತಿಯನ್ನು ಬಿಂಬಿಸುವ ಎತ್ತರದ ಪರ್ವತಗಳನ್ನು, ಮೇಲೆ ಬಿಳಿಯ ಮೋಡಗಳನ್ನು ಹೊಂದಿರುವ ಶಾಂತವಾದ ಸರೋವರವಿತ್ತು. ನೋಡಿದವರು ಇದನ್ನು ಶಾಂತಿಯ ಅತ್ಯುತ್ತಮ ಸಂಕೇತವೆಂದು ಕೊಂಡಾಡಿದರು. ಇನ್ನೊಂದು ಚಿತ್ರದಲ್ಲಿಯೂ ಪರ್ವತಗಳಿದ್ದವು, ಆದರೆ ಅವು ಬಹಳ ಒರಟಾದ ಮೈಯನ್ನು ಹೊಂದಿದ್ದವು. ಆಗಸ ರುದ್ರರೂಪ ತಾಳಿತ್ತು. ಮಳೆ ಹುಯ್ಯುತ್ತಿತ್ತು, ಮಿಂಚುತ್ತಿತ್ತು. ಪರ್ವತದ ಕೆಳಭಾಗದಲ್ಲಿ ಬೆಳ್ಳನೆಯ ಜಲಪಾತವಿತ್ತು. ಚಿತ್ರ ಯಾರಿಗೂ ಶಾಂತಿಯ ಸಂಕೇತವಾಗಿ ಕಾಣ ಸಲಿಲ್ಲ. ರಾಜ ಚಿತ್ರವನ್ನು ಸೂಕ್ಷ್ಮವಾಗಿ ನೋಡಿದಾಗ ಜಲಪಾತದ ಹಿಂದೆ ಪರ್ವತದ ಮೈಯ ಕೊರಕಲಿನಲ್ಲಿ ಸಣ್ಣದೊಂದು ಪೊದೆಯಿತ್ತಿ. ಆ ಪೊದೆಯಲ್ಲಿ ಒಂದು ತಾಯಿ ಹಕ್ಕಿ ಗೂಡು ಕಟ್ಟಿಕೊಂಡಿತ್ತು. ಭೋರ್ಗರೆಯುವ ಜಲಪಾತದ ಮಧ್ಯೆ ತಾಯಿ ಹಕ್ಕಿ ತನ್ನ ಗೂಡಿನಲ್ಲಿ ಪರಿಪೂರ್ಣ ಶಾಂತಿಯಿಂದ ಕುಳಿತುಕೊಂಡಿತ್ತು.
ರಾಜನ ಕಣ್ಣುಗಳು ಹಕ್ಕಿಯ ಮೇಲೆ ಬಿದ್ದೊಡನೆ ಸಂತಸ ಪಟ್ಟವು. ಬಹುಮಾನ ಆ ಚಿತ್ರ ಬರೆದವನಿಗೇ ಲಭಿಸಿತು. ಕೆಲವು ಮನಸ್ಸುಗಳು ಹೊರಗಿನ ಪರಿಸರ ಶಾಂತವಾಗಿದ್ದರೂ, ಕ್ಷುಬ್ಧವಾಗಿರುತ್ತದೆ. ಅದು ಅತ್ಯಂತ ಅಶಿಸ್ತಿನ ಮನಸ್ಸು, ಕೆಳಮಟ್ಟದ ಮನಸ್ಸು. ಇನ್ನು ಕೆಲವು ಮನಸ್ಸುಗಳು ಹೊರಗಿನ ಪರಿಸರ ಕ್ಷುಬ್ಧವಾದರೆ ಕ್ಷುಬ್ಧವೂ, ಶಾಂತವಾಗಿದ್ದರೆ ಶಾಂತವಾಗಿಯೂ ಇರುತ್ತದೆ. ಇವು ಮಧ್ಯಮ ವರ್ಗದ ಮನಸ್ಸು. ಮತ್ತೆ ಕೆಲವು ಮನಸ್ಸುಗಳು ಹೊರಗಿನ ಪರಿಸರ ಎಷ್ಟೇ ಅಶಾಂತಿಯಿಂದ, ಉದ್ವೇಗದಿಂದ ಕೂಡಿದ್ದರೂ ತಮ್ಮ ಮೇಲೆ ಕಿಂಚಿತ್ತೂ ಪರಿಣಾಮ ಬೀರದಂತೆ ಶಾಂತವಾಗಿರುತ್ತವೆ. ಇವು ಸುಶಿಕ್ಷಿತ, ಅಸಕ್ತವಾದ ಮನಸ್ಸುಗಳು. ಎರಡನೆಯ ಬಗೆಯವು ಬಾಹ್ಯಪ್ರಕೃತಿಯನ್ನು ಅವಲಂಬಿಸಿರುವುದರಿಂದ ಸ್ವತಂತ್ರವಲ್ಲ. ಸ್ವತಂತ್ರವಲ್ಲದ್ದು ಶಾಂತವೂ ಅಲ್ಲ. ಕೊನೆಯ ಬಗೆಯವು ಸ್ವತಂತ್ರವಾದವು. ಹೊರಗಿನ ಯಾವುದೇ ಪರಿಸ್ಥಿತಿ ಇವುಗಳ ಮೇಲೆ ತನ್ನ ಪರಿಣಾಮ ಬೀರಲಾರವು. ಮುಕ್ತಪುರುಷರ, ಸಂತರ ಮನಸ್ಸುಗಳು ಈ ಬಗೆಯವು.

By | 2017-05-14T23:57:19+00:00 May 14th, 2017|Kannada Articles|0 Comments

About the Author:

%d bloggers like this: