ಎಲ್ಲರನ್ನೂ ಸಮಾನರಾಗಿ ಪ್ರೀತಿಸುವ ಕಲೆ

//ಎಲ್ಲರನ್ನೂ ಸಮಾನರಾಗಿ ಪ್ರೀತಿಸುವ ಕಲೆ

ಎಲ್ಲರನ್ನೂ ಸಮಾನರಾಗಿ ಪ್ರೀತಿಸುವ ಕಲೆ

ಬಾಳಿನಲ್ಲಿ ಪ್ರೀತಿ ಎಲ್ಲರಿಗೂ ಬೇಕಾದದ್ದೆ. ಯಾರೂ ಪ್ರೀತಿಯಿಲ್ಲದ ಬರಡು ಬಾಳನ್ನು ಊಹಿಸಿಕೊಳ್ಳಲೂ ಆರರು. ಪ್ರೀತಿಯೊಂದು ಜೊತೆಗಿದ್ದರೆ ಬರಡಾದ ಮರಳುಗಾಡಿನಲ್ಲಿಯೂ ವರ್ಷಗಟ್ಟಲೆ ಜೀವನ ನಡೆಸಬಲ್ಲ. ಎಂತಹ ಕಷ್ಟವನ್ನೂ ಸಹಿಸಿಕೊಳ್ಳಬಲ್ಲ. ಆದರೆ, ಈ ಪ್ರೀತಿಯಿಂದ ಅನೇಕ ಬಾರಿ ಮನಸ್ಸಿಗೆ ಅಸಹ್ಯ ವೇದನೆಯೂ ಕಟ್ಟಿಟ್ಟಿದ್ದೆ! ಅತ್ಯಂತ ಮೃದುವಾದ ಪ್ರೀತಿಯು ಅಷ್ಟು ವೇದನೆಯನ್ನು ನೀಡುತ್ತದೆಂಬ ಸಂಗತಿಯೆ ಸೋಜಿಗವನ್ನುಂಟುಮಾಡುತ್ತದೆ. ನಮ್ಮ ದೈನಂದಿನ ಜೀವನದಲ್ಲಿ ಪದೇ ಪದೇ ಅನುಭವಕ್ಕೆ ಬರುವ ಈ ಸತ್ಯವನ್ನು ಮರುಮಾತಿಲ್ಲದೆ ಒಪ್ಪಿಕೊಂಡರೂ ಅದಕ್ಕೆ ಬಹುಶಃ ಯಾವ ಪರಿಹಾರವೂ ಇರಲಿಕ್ಕಿಲ್ಲ, ಇದು ಲೋಕದ ಸಹಜಗತಿಯೆಂಬ ಅಭಿಪ್ರಾಯವನ್ನೇ ಸಮಾಧಾನವಾಗಿ ನೀಡುತ್ತ ಬರುತ್ತೇವೆ. ಈ ಅಭಿಪ್ರಾಯವು ಪ್ರೀತಿಯ ಬಗ್ಗೆ ಹೆಚ್ಚು ಆಲೋಚಿಸದೆ ಮಾಡಿದ ತೀರ್ಮಾನವಷ್ಟೆ. ಪ್ರೀತಿಯ ವಿಷಯದಲ್ಲಿ ಅರಿತುಕೊಳ್ಳಬೇಕಾದ್ದು ಬಹಳವಿದೆ. ಮೊದಲನೆಯದಾಗಿ ನಾವು ಎಲ್ಲರೂ ಪ್ರೀತಿಸಲ್ಪಡಬೇಕೆಂದು ಬಯಸುವುದು ನಮ್ಮ ಒಂಟಿತನದ ಭಾವನೆಯಿಂದ ಮುಕ್ತರಾಗಲು. ಮನುಷ್ಯ ತಾನು ಬೇರೆಯವರಿಂದ ಕಳಚಿಕೊಂಡಿಲ್ಲವೆಂದು ಖಚಿತಪಡಿಸಿಕೊಳ್ಳಲು ಪ್ರೀತಿಸುತ್ತಾನೆ. ಪ್ರೀತಿಸುವುದು ಮಾನವನ ಜೀವನದಲ್ಲಿ ಅಷ್ಟು ಅವಶ್ಯವೆಂದ ಮೇಲೆ ಅದು ಇನ್ನೊಂದು ವ್ಯಕ್ತಿಯ ನಡುವಳಿಕೆಯ ಮೇಲಾಗಲಿ ಆ ವ್ಯಕ್ತಿಯಲ್ಲಿರುವ ಗುಣಗಳ ಮೇಲಾಗಲಿ ನಿಂತಿರಬೇಕಾಗಿಲ್ಲ. ಯಾವುದಾದರೂ ನಿಮಿತ್ತವನ್ನಿಟ್ಟುಕೊಂಡು ನಮ್ಮಲ್ಲಾಗುವ ಪ್ರತಿಕ್ರಿಯೆಯಲ್ಲಿ ಸ್ವಾತಂತ್ರ್ಯವಿರುವುದಿಲ್ಲ. ಸ್ವಾತಂತ್ರ್ಯವಿಲ್ಲದ್ದು ತಾತ್ಕಾಲಿಕ ನರಗಳ ಉಪಶಮನಕ್ಕೆ ಕಾರಣವಾದರೂ ಕೊನೆಗೆ ನಮ್ಮನ್ನು ಬಹಳ ದುಃಖಕ್ಕೆ ಒಳಪಡಿಸುತ್ತದೆ. ಹಾಗಾದರೆ ಪ್ರೀತಿಯ ಸ್ವಭಾವವೇ ಆದ ಆನಂದ ಹಾಗೂ ಸ್ವಾತಂತ್ರ್ಯವನ್ನು ಅನುಭವಿಸಬೇಕಾದರೆ, ಜೀವನದಲ್ಲಿ ಅಭಿವ್ಯಕ್ತ ಪಡಿಸಬೇಕಾದರೆ ಏನು ಮಾಡಬೇಕೆಂಬುದು ಆ ವ್ಯಕ್ತಿಯ ಪ್ರೀತಿಸುವ `ಕಲೆ’ಯ ಮೇಲೆ ನಿಂತಿದೆ. ಹೌದು, ಇದೊಂದು ಪ್ರತಿಕ್ರಿಯೆಯಲ್ಲ. ಕಲೆ. ಆದ್ದರಿಂದ ಇದು ಸುಲಭವೆಂದೇನೂ ಅಲ್ಲ. ಮೊದಲಿಗೆ ವ್ಯಕ್ತಿ ಅರಿಯಬೇಕಾಗುತ್ತದೆ, ಪ್ರೀತಿಯಲ್ಲಿ ಇರುವ ಆನಂದದ ಅಭಿವ್ಯಕ್ತಿ `ನೀಡುವುದರಲ್ಲೇ’ ಇರುವುದು ಹೊರತು ಹಿಂತಿರುಗಿ ಪಡೆಯುವುದರಲ್ಲಲ್ಲ. ತಾನು ನೀಡಿದ ಪ್ರೀತಿಗೆ `ಬಂದಂತಹ ಪ್ರತಿಕ್ರಿಯೆ’ಯೆ ಆನಂದದ ಅಭಿವ್ಯಕ್ತಿಯೆಂಬುದಾಗಿ ಭ್ರಾಂತಿಯಿಂದ ವ್ಯಕ್ತಿ ಭಾವಿಸುತ್ತಾನೆ. ಮುಂದಿನ ತನ್ನ ಎಲ್ಲ ವ್ಯವಹಾರಗಳಲ್ಲಿಯೂ ಭ್ರಾಂತಿಯಿಂದ ಉಪಲಬ್ಧವಾದ ಇದೇ ದತ್ತಾಂಶವನ್ನು ಇಟ್ಟುಕೊಂಡು ಅಳೆಯುತ್ತ ಹೋಗುತ್ತಾನೆ. ಶಾರದಾದೇವಿಯವರು ಒಂದು ವ್ಯಾವಹಾರಿಕ ಸಲಹೆಯನ್ನು ನೀಡುತ್ತ ಹೇಳುತ್ತಾರೆ, “ಯಾರಿಂದಲೂ ಏನನ್ನೂ ಬಯಸಬಾರದು. ಏಕೆಂದರೆ, ಯಾರು ಹೆಚ್ಚು ನೀಡುವರೊ ಅವರನ್ನು ಹೆಚ್ಚು ಪ್ರೀತಿಸುತ್ತೇವೆ. ಯಾರು ಕಡಿಮೆ ನೀಡುವರೊ ಅವರನ್ನು ಕಡಿಮೆ ಪ್ರೀತಿಸುತ್ತೇವೆ.” ಇನ್ನೊಬ್ಬರಿಂದ ಬಯಸುವುದೇ ನಮ್ಮ ಪ್ರೀತಿಯ ಸಮಾನ ಅಭಿವ್ಯಕ್ತಿಗೆ ಅಡಚಣೆಯಾಗುತ್ತದೆ.

By | 2017-05-14T23:40:54+00:00 May 14th, 2017|Kannada Articles|0 Comments

About the Author:

%d bloggers like this: