ಆಲೋಚನೆಯ ಆಯಾಮ ಬದಲಾದಾಗ

//ಆಲೋಚನೆಯ ಆಯಾಮ ಬದಲಾದಾಗ

ಆಲೋಚನೆಯ ಆಯಾಮ ಬದಲಾದಾಗ

ಒಬ್ಬಳು ಮುದುಕಿ ದೇವಸ್ಥಾನದ ಮುಂದೆ ಕುಳಿತು ಹೂವು ಮಾರುತ್ತಿದ್ದಳು. ಎಂದೂ ಅವಳ ಮುಖ ನಗುವನ್ನು ಕಂಡಿರಲಿಲ್ಲ. ಮಳೆಗಾಲದಲ್ಲಿಯೂ, ಬೇಸಿಗೆಯಲ್ಲೂ ಏಕಪ್ರಕಾರವಾಗಿ ಅಳುವುದೆ ಅವಳಿಗೆ ಅಭ್ಯಾಸವಾಗಿ ಹೋಗಿತ್ತು. ಒಮ್ಮೆ ಆ ದೇವಸ್ಥಾನದ ಮುಂದೆ ಹಾದು ಹೋಗುತ್ತಿದ್ದ ಯುವಕನೊಬ್ಬ ಆಕೆ ಅಳುತ್ತಿದ್ದುದನ್ನು ಕಂಡು ಅನುಕಂಪೆಯಿಂದ ಅವಳ ಅಳುವಿಗೆ ಕಾರಣವನ್ನು ಕೇಳಿದ. ಅವಳು ತನ್ನ ಗೋಳನ್ನು ಹೇಳಿಕೊಂಡಳು. ಮುದುಕಿಗೆ ಇಬ್ಬರು ಹೆಣ್ಣು ಮಕ್ಕಳು. ಒಬ್ಬಳನ್ನು ಶೂ ವ್ಯಾಪಾರಿಗೆ ಕೊಟ್ಟು ಮದುವೆ ಮಾಡಿದ್ದಳು. ಇನ್ನೊಬ್ಬಳನ್ನು ಕೊಡೆ ವ್ಯಾಪಾರಿಗೆ ಕೊಟ್ಟಿದ್ದಳು. ಮಳೆಗಾಲದಲ್ಲಿ ಯಾರೂ ಶೂ ವ್ಯಾಪಾರ ಮಾಡುತ್ತಿರಲಿಲ್ಲ ಹಾಗೆಯೆ, ಮೋಡವೇ ಇಲ್ಲದ ದಿನಗಳಲ್ಲಿ ಕೊಡೆ ವ್ಯಾಪಾರ ಮಾಡುತ್ತಿರಲಿಲ್ಲ. ಹೀಗಾಗಿ ಅಂತಹ ದಿನಗಳಲ್ಲಿ ತನ್ನ ಮಕ್ಕಳ ಜೀವನ ಕಷ್ಟಕರವೆಂಬುದಾಗಿ ಹೇಳಿಕೊಂಡು ಅಳುತ್ತಿದ್ದಳು. ಆ ಯುವಕ ಪ್ರಶ್ನಿಸಿದ, “ಆದರೆ, ಮಳೆಗಾಲದಲ್ಲಿ ಕೊಡೆ ಮಾರುವವನ ವ್ಯಾಪಾರ ಹಾಗೂ ಮೋಡವಿಲ್ಲದ ದಿನಗಳಲ್ಲಿ ಶೂ ಮಾರಾಟ ಚೆನ್ನಾಗಿಯೇ ಆಗುತ್ತದೆಂದು ಏಕೆ ಆಲೋಚಿಸಬಾರದು, ಅಜ್ಜಿ?”, ಎಂದು. ಮುದುಕಿಗೆ ತಕ್ಷಣ ಯುವಕನ ಮಾತು ಹಿಡಿಸಿತು. “ಅರೆ, ಹೌದಲ್ಲ. ನಾನು ಈ ರೀತಿ ಯೋಚಿಸಿಯೇ ಇರಲಿಲ್ಲ”, ಎಂದಳು ನಗುತ್ತ. ಅಂದಿನಿಂದ ಅಳುವ ಮುದುಕಿ ನಗುವ ಮುದುಕಿಯಾದಳು.
ಎಷ್ಟೋ ವೇಳೆ ನಮ್ಮ ಸಮಸ್ಯೆಗಳೂ ಹೀಗೆಯೆ. ಕಷ್ಟಗಳು ಎದುರಾದಾಗ, ಅಗಲುವಿಕೆಯ ದುಃಖವನ್ನು ಸಹಿಸಬೇಕಾದಾಗ ನಾವೊಬ್ಬರೆ ಕಷ್ಟಕ್ಕೊಳಗಾಗಿರುವುದು, ದುಃಖಕ್ಕೊಳಗಾಗಿರುವುದೆಂಬ ಭಾವನೆ ನಮ್ಮನ್ನು ಆವರಿಸಿ ನಮ್ಮ ವ್ಯಥೆಯನ್ನು ಹೆಚ್ಚಿಸುತ್ತದೆ. ನಮ್ಮಷ್ಟೆ ದುಃಖದಲ್ಲಿರುವವರನ್ನು ಕಂಡಾಗ ನಮ್ಮ ದುಃಖ ಬಹಳ ಮಟ್ಟಿಗೆ ಕಡಿಮೆಯಾಗುತ್ತದೆ. ಇಂಥ ಸಮಯಗಳಲ್ಲಿ ಸಕಾರಾತ್ಮಕ ಮನೋಭಾವನೆಯನ್ನು ತಾಳುವುದೇ ಇದಕ್ಕೆ ಸೂಕ್ತ ಪರಿಹಾರ. ನಮ್ಮ ಮನಸ್ಸಿಗೆ ಹಲವು ಬಗೆಯ ಆಯಾಮಗಳಿಂದ ಆಲೋಚಿಸುವುದನ್ನು ಕಲಿಸಿಕೊಡಬೇಕು. ಅದೇ ನಿಜವಾದ ಶಿಕ್ಷಣ. ಈ ರೀತಿಯ ಶಿಕ್ಷಣದಿಂದ ಜೀವನವನ್ನು ಸುಖಮಯವನ್ನಾಗಿ ಮಾಡಬಹುದು.

By | 2017-05-14T23:44:48+00:00 May 14th, 2017|Kannada Articles|0 Comments

About the Author:

%d bloggers like this: