+91 9611100374|admin@indiaforyou.in

ಯಾರನು ಬಯಸಿ

Home//ಯಾರನು ಬಯಸಿ

ಯಾರನು ಬಯಸಿ

ಯಾರನು ಬಯಸಿ ಶ್ರೀಭುವನೇಶ್ವರಿ
ಹರಕೆಯ ಹೊತ್ತಳೊ ವೀರೇಶ್ವರನಲಿ
ವೀರೇಶ್ವರ ಶಿವ ಯಾವನ ರೂಪದಿ
ಧರೆಯನು ಪಾವನಗೈದನೊ ಅಂತಹ
ವೀರ ವಿವೇಕಾನಂದ ನಮೋ||

ಯಾವನ ಲೀಲೆಯ ಸಹಿಸದೆ ಮಾತೆಯು
ಶಿವನೇನೀ ಬಾರೆನ್ನುತ ಮೊರೆಯಿಡೆ
ಇವನನು ಏತಕೆ ಕಳುಹಿದೆ ಎನ್ನುತ
ಯಾವನ ಹಂಗಿಸುತಿದ್ದಳೊ ಅಂತಹ
ವೀರ ವಿವೇಕಾನಂದ ನಮೋ||

‘ಇರುವನೊ ದೇವರು? ಇಲ್ಲವೊ?’ ಎನ್ನುತ
ಗುರುವನು ಭರದಿಂ ಪ್ರಶ್ನಿಸಿ ಕೂಡಲೆ
ಇರುವನು ತೋರುವೆ ನಿನಗೂ ಎನ್ನುವ
ಮರುದನಿಯಿಂದ ಚಕಿತನಾದಂತಹ
ವೀರ ವಿವೇಕಾನಂದ ನಮೋ||

ರಾಮಕೃಷ್ಣರಲಿ ಸೇವಾವೃತ್ತಿಯ
ಪ್ರೇಮದಿ ಮಾಡುತ ಸಾಧನೆಗೈಯುತ
ಬ್ರಹ್ಮದ ಅನುಭವ ಬೇಗನೆ ಪಡೆಯುತ
ಕಾಮಿನಿ-ಕಾಂಚನ-ಬಂಧನ ನೀಗಿದ
ವೀರ ವಿವೇಕಾನಂದ ನಮೋ||

ಗುರುವಿನ ಪ್ರಸ್ಥಾನಾನಂತರದಲಿ
ವಿರಾಗ ಪಡೆಯುತಕಾವಿಯ ಧರಿಸುತ
ಭಾರತ ಭುವಿಯಲಿ ಸುತ್ತುತ ತಿರುಗುತ
ವಿರಸವ ವೀಕ್ಷಿಸಿ ದುಃಖಿಸಿದಂತಹ
ವೀರ ವಿವೇಕಾನಂದ ನಮೋ||

ದೇಶವಿದೇಶದಿ ವೇದದ ತತ್ತ್ವವ
ಪ್ರಸಾರ ಮಾಡುತ ಸರ್ವರ ಹೃದಯದಿ
ಈಶಪ್ರೇಮವ ಮೊಳೆಯಿಸಿ ಬೆಳೆಯಿಸಿ
ಶ್ರೀಶನ ಚರಣದಿ ಲಯವಾದಂತಹ
ವೀರ ವಿವೇಕಾನಂದ ನಮೋ||

—-ಸ್ವಾಮಿ ಹರ್ಷಾನಂದ

By | 2015-04-17T12:30:32+00:00 April 17th, 2015||0 Comments

About the Author:

Leave A Comment